ಕನ್ನಡ ಸುದ್ದಿ  /  ಕರ್ನಾಟಕ  /  Bangalore New Airport: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಯಾರಿ ಆರಂಭಿಸಿದ ಕರ್ನಾಟಕ; ಎಲ್ಲಿ ನಿರ್ಮಾಣವಾಗಬಹುದು?

Bangalore New Airport: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಯಾರಿ ಆರಂಭಿಸಿದ ಕರ್ನಾಟಕ; ಎಲ್ಲಿ ನಿರ್ಮಾಣವಾಗಬಹುದು?

Bangalore News ಬೆಂಗಳೂರಿನ ದೇವನಹಳ್ಳಿ ಸಮೀಪವಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದ್ದು ಮತ್ತೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎನ್ನುವುದು ನಿರ್ವಿವಾದ. ಈ ಕಾರಣದಿಂದಲೇ ಹೊಸ ವಿಮಾನ ನಿಲ್ದಾಣದ ಯೋಜನೆ ಶುರುವಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣದ ಯೋಜನೆ ಶುರುವಾಗಿದೆ.
ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣದ ಯೋಜನೆ ಶುರುವಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ, ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಚರ್ಚೆ ಆರಂಭವಾಗಿದೆ. ಎಲ್ಲಿ ನಿರ್ಮಿಸಬೇಕೆಂದು ಇನ್ನೂ ಅಂತಿಮ ನಿರ್ಧಾರವಾಗಿಲ್ಲವಾದರೂ ಮತ್ತೊಂದು ವಿಮಾನ ನಿಲ್ದಾಣದದ ಅವಶ್ಯಕತೆ ಇದೆ ಎನ್ನುವುದಂತೂ ಸತ್ಯ ಮತ್ತು ಅನಿವಾರ್ಯವೂ ಹೌದು ಎಂದು ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.

ಈಗಾಗಲೇ ಈ ಸಂಬಂಧ ಚರ್ಚೆ ಆರಂಭಿಸಿರುವ ಭಾರಿ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ 2033ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯ 150 ಕಿಮೀ ಸುತ್ತ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವಂತಿಲ್ಲ. ಈಗಿನಿಂದಲೇ ತಯಾರಿ ನಡೆಸಿದರೆ ತ್ವರಿತಗತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ತಾಪನೆ ತುರ್ತಾಗಿ ಆಗಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.

150 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸಬಾರದು ಎಂಬ ಷರತ್ತು ಇರುವುದು ನಿಜ. ಈಗಿನಿಂದಲೇ ಕಾರ್ಯಪ್ರವೃತರಾದರೆ ಮುಂದಿನ 8 ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂಬ ಉದ್ದೇಶದಿಂಧ ತಯಾರಿ ನಡೆಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಯಾವ ಭಾಗದಲ್ಲಿ ಸ್ಥಾಪನೆಯಾಗಲಿದೆ?

ಬೆಂಗಳೂರಿನ ಯಾವ ಭಾಗದಲ್ಲಿ ವಿಮಾನ ನಿಲ್ದಣ ಸ್ಥಾಪಿಸಬೇಕೆಂಬ ನಿರ್ಧಾರ ಆಗಿಲ್ಲ. ಕನಕಪುರ ಭಾಗದಲ್ಲಿ ಸ್ಥಾಪಿಸಲು ಒತ್ತಡವಿದೆ. ಹಾಗೆಯೇ ಕೆಂಪೇಗೌಡ ವಿಮಾನ ನಿಲ್ದಾಣ

ಸಮೀಪ ಸ್ಥಾಪಿಸುವುದಾದರೆ ದಾಬಸ್‌ ಪೇಟೆ ಅಥವಾ ತುಮಕೂರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸರ್ಜಾಪುರ ಬಳಿ ಸ್ಥಾಪನೆಗೂ ಒತ್ತಡ ಹೆಚ್ಚಿದೆ. ಈ ಎಲ್ಲ ಸಾಧ್ಯತೆಗಳನ್ನು ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ಲಾಬಿ ಆರಂಭಿಸಿದ ಸಚಿವರು ಶಾಸಕರು

ಎರಡನೇ ವಿಮಾನ ನಿಲ್ದಾಣದ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ಡ ಆರಂಭಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತುಮಕೂರು ಜಿಲ್ಲೆಯ ಶಿರಾ ಅಥವಾ ಪಾವಗಡ ಮತ್ತು ಚಿತ್ರದುರ್ಗದ ನಡುವೆ ಸ್ಥಾಪಸುವಂತೆ ಹೇಳುತ್ತಿದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಬೇಕಾದ 8000 ಎಕರೆ ಜಮೀನು ಲಭ್ಯ ಎನ್ನುವುದು ಅವರ ವಾದವಾಗಿದೆ.

ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬಿಡದಿ ಅಥವಾ ಹಾರೋಹಳ್ಳಿ ಸಮೀಪ ಸ್ಥಾಪಿಸುವಂತೆ ಲಾಬಿ ಆರಂಭಿಸಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಗಡಿ, ಸೋಲೂರು ಅಥವಾ ದಾಬಸ್‌ ಪೇಟೆ ಬಳಿ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮತ್ತೊಂದು ಕಡೆ ತಜ್ಞರು ಈಗಾಗಲೇ ಅಸ್ತಿತ್ವದಲ್ಲಿದ್ದ ಎಚ್.ಎಲ್‌ ವಿಮಾನ ನಿಲ್ಧಾವನ್ನೇ ಮರು ಆರಂಭಿಸುವಂತೆಯೂ ಸಲಹೆ ನೀಡಿದ್ದಾರೆ.

ಎರಡು ವಿಮಾನ ನಿಲ್ದಾಣಗಳ ನಡುವೆ 150 ಕಿಮೀ ಅಂತರವಿರಲೇಬೇಕೆನ್ನುವುದು ಕಡ್ಡಾಯವೇನಲ್ಲ. ಮುಂಬೈನ ಎರಡು ನಿಲ್ದಾಣಗಳ ನಡುವೆ ಕೇವಲ 36 ಕಿಮೀ ಅಂತರವಿದೆ.

ನ್ಯೂಯಾರ್ಕ್‌ ಲಂಡನ್‌ ನಗರಗಳಲ್ಲಿಯೂ ಅಂತಹ ಹೆಚ್ಚಿನ ಅಂತರವೇನಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಒಟ್ಟಿನಲ್ಲಿ ಮತ್ತೊಂದು ವಿಮಾನ ತಲೆ ಎತ್ತುವುದು ಖಚಿತವಾಗಿದ್ದು ಎಲ್ಲಿ ಎನ್ನುವುದು ತೀರ್ಮಾನವಾಗಿಲ್ಲ.‌ ರೈತರು ತಮ್ಮ ತಮ್ಮ ಜಮೀನುಗಳನ್ನು ಅಲ್ಪ ಲಾಭದ ಆಸೆಗೆ ಮಾರಿಕೊಳ್ಳದೆ ಆಮಿಷಗಳಿಗೆ ಬಲಿಯಾಗದೆ ಉಳಿಸಿಕೊಂಡರೆ ಭವಿಷ್ಯದಲ್ಲಿ ಭರ್ಜರಿ ಲಾಭ ಪಡೆಯುವ ಅವಕಾಶಗಳಿವೆ.

ವಿಮಾನ ನಿಲ್ದಾಣಕ್ಕೆ ದಶಕದ ಅವಶ್ಯಕತೆ ಇರುತ್ತದೆ. ಸಾವಿರಾರು ಎಕರೆ ಭೂಮಿಯ ಅವಶ್ಯಕತ ಇರುತ್ತದೆ. ಹತ್ತಾರು ಪ್ರಕ್ರಿಯೆಗಳನ್ನು ಪೂರಣಗೊಳಿಸಬೇಕಾಗುತ್ತದೆ., ಪೂರ್ವಭಾವಿ ಕೆಲಸಗಳೇ ವರ್ಷಗಟ್ಟಲೆ ಹಿಡಿಯತ್ತದೆ. ಭೂ ಮಾಲೀಕರಿಗೆ ಪರಿಹಾರ ವಿತರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

ವರದಿ: ಎಚ್.ಮಾರುತಿ,ಬೆಂಗಳೂರು