ಕನ್ನಡ ಸುದ್ದಿ  /  ಮನರಂಜನೆ  /  ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ತೂಕ ಇಳಿಕೆ; ಹಾಸಿಗೆ, ಚಮಚ, ಪುಸ್ತಕ, ಮನೆ ಊಟ ಬೇಕೆಂದು ಕೋರ್ಟ್‌ಗೆ ಮನವಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ತೂಕ ಇಳಿಕೆ; ಹಾಸಿಗೆ, ಚಮಚ, ಪುಸ್ತಕ, ಮನೆ ಊಟ ಬೇಕೆಂದು ಕೋರ್ಟ್‌ಗೆ ಮನವಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡ ನಟ ದರ್ಶನ್‌ ಜೈಲಿನಲ್ಲಿ ತೂಕ ಕಳೆದುಕೊಳ್ಳುತ್ತಿದ್ದು, ಮನೆ ಊಟ, ಹಾಸಿಗೆ, ಪುಸ್ತಕ ಮತ್ತಿತರ ವಸ್ತುಗಳನ್ನು ಬಯಸಿ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡ ನಟ ದರ್ಶನ್‌ ಜೈಲಿನಲ್ಲಿ ತೂಕ ಕಳೆದುಕೊಳ್ಳುತ್ತಿದ್ದು, ಮನೆ ಊಟ, ಹಾಸಿಗೆ, ಪುಸ್ತಕ ಮತ್ತಿತರ ವಸ್ತುಗಳನ್ನು ಬಯಸಿ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೈಲಿನಲ್ಲಿರುವ ದರ್ಶನ್‌ ಈಗಾಗಲೇ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಸೇರದ ಜೈಲಿನ ಊಟ, ಚಿಂತೆಯಿಂದ ಆರೋಗ್ಯ ಹಾಳಾಗಬಹುದೆಂಬ ಆತಂಕದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಒಂದಿಷ್ಟು ಬೇಡಿಕೆಗಳನ್ನು ರಿಟ್‌ ಅರ್ಜಿ ಮೂಲಕ ಕೋರ್ಟಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಟ ದರ್ಶನ್‌ ಬೇಡಿಕೆ ಏನು?

ಜೈಲಿನಲ್ಲಿರುವ ನಟ ದರ್ಶನ್‌ ಊಟ, ಹಾಸಿಗೆ, ಪುಸ್ತಕ, ಬಟ್ಟೆ ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಜೈಲಿನಲ್ಲಿ ನೀಡುವ ಊಟ ಜೀರ್ಣವಾಗುತ್ತಿಲ್ಲ. ಫುಡ್‌ ಪಾಯಿಸನಿಂಗ್‌ನಿಂದ ಹೊಟ್ಟೆಯೂ ಕೆಡುತ್ತಿದೆ. ಹೀಗಾಗಿ, ಮನೆ ಊಟ ಸೇರಿದಂತೆ ಹಲವು ವಸ್ತುಗಳನ್ನು ಮನೆಯಿಂದ ಪಡೆಯಲು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

"ದರ್ಶನ್‌ ತೂಕ ತುಂಬಾ ಕಡಿಮೆಯಾಗಿದೆ. ಅತಿಸಾರ, ಭೇದಿ ಇದಕ್ಕೆ ಕಾರಣ. ಇವರು ಹಲವು ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಜೈಲಿನ ಅಧಿಕಾರಿಗಳೇ ಹೇಳಿದ್ದಾರೆ. ಮನೆ ಊಟ ನೀಡಲು ಕೋರ್ಟ್‌ ಆದೇಶ ಇಲ್ಲವೆಂದು ಜೈಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಜೈಲು ಅಧಿಕಾರಿಗಳು ಈ ರೀತಿ ಅವಕಾಶ ನೀಡದೆ ಇರುವುದು ಕಾನೂನು ಬಾಹಿರ. ಇದರಿಂದ ದರ್ಶನ್‌ ಆರೋಗ್ಯಕ್ಕೆ ಅಪಾಯವಿದೆ. ಮನೆಯಿಂದ ಊಟ ತರಿಸಿಕೊಂಡರೆ ಏನೂ ತೊಂದರೆ ಇಲ್ಲ. ಸರಕಾರದ ಬೊಕ್ಕಸಕ್ಕೂ ಹಣ ಉಳಿತಾಯವಾಗುತ್ತದೆ. ತನ್ನ ಕುಟುಂಬದವರಿಂದ ದರ್ಶನ್‌ ಮನೆ ಊಟ ಪಡೆಯಲು ಅವಕಾಶ ನೀಡಬೇಕು" ಎಂದು ದರ್ಶನ್‌ ಪರ ವಕೀಲರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್‌, ವಿನಯ್‌, ಪ್ರದೋಷ್‌, ಧನರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೇ ಜುಲೈ 4ರಂದು ಇವರ ನ್ಯಾಯಾಂಗ ಬಂಧನ ಅವಧಿ ಮುಗಿದಿತ್ತು. ಆದರೆ, ಪೊಲೀಸರು ಇನ್ನೂ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡದೆ ಇದ್ದ ಕಾರಣ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿತ್ತು. ಜುಲೈ 4ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗಿತ್ತು. ಸದ್ಯ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿಲ್ಲ. ಚಾರ್ಜ್‌ ಶೀಟ್‌ ಸಲ್ಲಿಕೆಯಾಗುವವರೆಗೆ ನ್ಯಾಯಾಂಗ ಬಂಧನವೇ ಮುಂದುವರೆಯಲಿದೆ.